ಹೋಮ್‍ರೂಲ್ ಚಳವಳಿ
	ಭಾರತ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಜರುಗಿದ ಪ್ರಸಿದ್ಧ ಚಳವಳಿ. ಇದರ ಸ್ಥಾಪಕರು ಡಾ. ಆನಿಬೆಸೆಂಟ್. ಇವರು ಐರ್ಲೆಂಡ್ ದೇಶದವರು. ಈ ಚಳವಳಿಯನ್ನು ಭಾರತದಲ್ಲಿ 1916ರಲ್ಲಿ ಆರಂಭಿಸಲಾಯಿತು. ಆನಿಬೆಸೆಂಟ್ ಅಧ್ಯಕ್ಷರಾಗಿ ಹಾಗೂ ಜಾರ್ಜ್ ಅರುಂಡೇಲ್ ಸಂಘಟನಾ ಕಾರ್ಯದರ್ಶಿಯಾಗಿ ನಿಯುಕ್ತರಾದರು. ಐರ್ಲೆಂಡ್‍ನಲ್ಲಿ ನಡೆಯುತ್ತಿದ್ದ ಹೋಮ್‍ರೂಲ್ ಚಳವಳಿಯ ಪ್ರೇರಣೆಯಿಂದ ಭಾರತದಲ್ಲಿ ಈ ಚಳವಳಿಯನ್ನು ವ್ಯವಸ್ಥಿತವಾಗಿ ಸಂಘಟಿಸಿದವರು ಆನಿಬೆಸೆಂಟ್ ಹಾಗೂ ಬಾಲಗಂಗಾಧರ ಟಿಳಕ್. ಇದರ ಉದ್ದೇಶ ಭಾರತದಲ್ಲಿ ಸ್ವಯಂ ಆಡಳಿತ ಪಡೆಯುವುದಾಗಿತ್ತು. 

	ಒಂದನೆಯ ಮಹಾಯುದ್ಧದ ಕಾಲದಲ್ಲಿ ರಾಷ್ಟ್ರೀಯ ಚಳವಳಿಗೆ ತೀವ್ರ ಹಿನ್ನಡೆಯುಂಟಾಗಿತ್ತು. ಮಂದಗಾಮಿ ನಾಯಕತ್ವದಲ್ಲಿ ತೃಪ್ತಿಕರ ವಾದ ಸಾಧನೆಗಳೇನೂ ಆಗಿರಲಿಲ್ಲ. ಇದರೊಂದಿಗೆ ಮಹಾಯುದ್ಧದ ಕಾಲದಲ್ಲಿ ಬ್ರಿಟಿಷ್ ಸರ್ಕಾರ ಜಾರಿಗೊಳಿಸಿದ ತೀವ್ರ ದಬ್ಬಾಳಿಕೆ ನೀತಿಯಿಂದ ಭಾರತೀಯರು ಅಸಮಾಧಾನ ಗೊಂಡರು. ಈ ಸಂದರ್ಭದಲ್ಲಿ ಬಾಲಗಂಗಾಧರ ಟಿಳಕರ ಬಿಡುಗಡೆಯಾಯಿತು (1914). ಐರ್ಲೆಂಡಿನಲ್ಲಿ ಐರಿಷರು ಆಡಳಿತ ಸುಧಾರಣೆಗಾಗಿ ನಡೆಸುತ್ತಿದ್ದ ಹೋಮ್‍ರೂಲ್ ಚಳವಳಿ ಮಾದರಿಯಲ್ಲಿ ಭಾರತದಲ್ಲೂ ಆಡಳಿತ ಸುಧಾರಣೆಗಾಗಿ ಹೋಮ್‍ರೂಲ್ ಅಥವಾ ಸ್ವಯಂ ಆಡಳಿತಕ್ಕಾಗಿ ಹೋರಾಟ ನಡೆಸಬೇಕಾದ ಆವಶ್ಯಕತೆಯಿದೆ ಎಂದು ಬಾಲಗಂಗಾಧರ ಟಿಳಕರು ಘೋಷಿಸಿದರು. 1916 ಏಪ್ರಿಲ್ 28ರಂದು ಬೆಳಗಾಂವಿಯಲ್ಲಿ ಸಮ್ಮೇಳನ ನಡೆದು ಹೋಮ್‍ರೂಲ್ ಲೀಗ್ ಸ್ಥಾಪಿಸಲಾಯಿತು. ಇದೇ ವೇಳೆಯಲ್ಲಿ ಆನಿಬೆಸೆಂಟರು ಸ್ವರಾಜ್ಯ ಹಾಗೂ ಸ್ವಯಂ ಆಡಳಿತವನ್ನು ಹೋಮ್‍ರೂಲ್ ಚಳವಳಿಯಿಂದ ಮಾತ್ರ ಪಡೆಯಬಹುದೆಂದು, ಭಾರತವನ್ನು ದಾಸ್ಯದಿಂದ ಪಾರುಮಾಡಬಹುದೆಂದು ನ್ಯೂ ಇಂಡಿಯಾ ಪತ್ರಿಕೆಯಲ್ಲಿ ಬರೆದರು. ಶೀಘ್ರದಲ್ಲಿಯೇ ಬೇರೊಂದು ಹೋಮ್‍ರೂಲ್ ಲೀಗನ್ನು ಸ್ಥಾಪಿಸುವ ಉದ್ದೇಶವಿರುವುದಾಗಿ ಸ್ಪಷ್ಟಪಡಿಸಿದರು. ಹೋಮ್‍ರೂಲ್ ಲೀಗ್‍ನ ಸ್ಥಾಪನೆಯಾದ ಅನಂತರ ಬಾಲಗಂಗಾಧರ ಟಿಳಕರಿಗೂ ಆನಿಬೆಸೆಂಟರಿಗೂ ಹೋರಾಟದ ವಿಧಾನ, ಆಲೋಚನೆಗಳಲ್ಲಿ ತಾತ್ತ್ವಿಕ ಭಿನ್ನಾಭಿಪ್ರಾಯ ಏರ್ಪಟ್ಟಿದ್ದರಿಂದ ಎರಡೂ ಹೋಮ್‍ರೂಲ್ ಲೀಗ್‍ಗಳು ಒಂದುಗೂಡಲಿಲ್ಲ. ಈ ರೀತಿ ಆನಿಬೆಸೆಂಟರ ಹೋಮ್ ರೂಲ್ ಫಾರ್ ಇಂಡಿಯ ಲೀಗ್ ಹಾಗೂ ಬಾಲಗಂಗಾಧರ ಟಿಳಕರ ಇಂಡಿಯನ್ ಹೋಮ್‍ರೂಲ್ ಲೀಗ್ ಪ್ರತ್ಯೇಕವಾಗಿ ಕಾರ್ಯನಿರ್ವಹಿಸಿ ದುವು. ಬಾಲಗಂಗಾಧರ ಟಿಳಕರ ಹೋಮ್‍ರೂಲ್ ಲೀಗ್‍ಫಾರ್ ಮಹಾರಾಷ್ಟ್ರ ಹಾಗೂ ಕರ್ನಾಟಕಗಳಲ್ಲಿ ಕೇಂದ್ರೀಕರಿಸಿದರೆ, ಆನಿಬೆಸೆಂಟ ರದು ದಕ್ಷಿಣ ಭಾರತಾದ್ಯಂತ ವ್ಯಾಪಿಸಿತಲ್ಲದೆ ಬಿಹಾರ, ಬಂಗಾಲ, ಗುಜರಾತ್ ಮುಂತಾದಡೆಗಳಲ್ಲೂ ಕಾರ್ಯನಿರ್ವಹಿಸಿತು. 

	ಬಾಲಗಂಗಾಧರ ಟಿಳಕರು ಹೋಮ್‍ರೂಲ್ ಲೀಗಿನ ಆರು ಶಾಖೆಗಳನ್ನು ಸ್ಥಾಪಿಸಿ 1918ರ ವೇಳೆಗೆ 32,000 ಸದಸ್ಯರನ್ನು ಒಳಗೊಂಡಿತ್ತು. ಕರಪತ್ರ ಹಂಚುವುದು, ಬರೆಹಗಳು ಹಾಗೂ ಭಾಷಣಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿದರು. ಜೊತೆಗೆ ಸಾಮಾಜಿಕ ಸೇವಾಕಾರ್ಯಗಳನ್ನು ಹಮ್ಮಿಕೊಳ್ಳಲಾಯಿತು. ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ ಬ್ರಿಟಿಷ್ ಸರ್ಕಾರ ಬಾಲಗಂಗಾಧರ ಟಿಳಕರಿಗೆ ಷೋಕಾಸ್ ನೋಟೀಸನ್ನು ಕಳಿಸಿ 60 ಸಾವಿರ ರೂಪಾಯಿ ಭದ್ರತಾ ಠೇವಣಿಯಾಗಿಡಬೇಕೆಂದು ಆದೇಶ ನೀಡಿತು. ಟಿಳಕರ ಪರವಾಗಿ ಭಾರತೀಯ ವಕೀಲರು ನ್ಯಾಯಾಲಯದಲ್ಲಿ ಹೋರಾಡಿ ತಡೆಯಾಜ್ಞೆ ತಂದರು. 

	ಆನಿಬೆಸೆಂಟರ ಹೋಮ್‍ರೂಲ್ ಲೀಗಿನ 200 ಶಾಖೆಗಳು ದೇಶಾದ್ಯಂತ ತಲೆಎತ್ತಿದುವು. ರಾಜಕೀಯ, ಶಿಕ್ಷಣ ಹಾಗೂ ಚರ್ಚೆಗಳ ಮೂಲಕ ಜಾಗೃತಿ ಮೂಡಿಸಿ ಚಳವಳಿಯನ್ನು ಪ್ರಮುಖ ಜನಾಂದೋಲನವನ್ನಾಗಿ ಮಾಡಲು ಪ್ರಯತ್ನಿಸಿದರು. ಜೊತೆಗೆ ಸಮಾಜ ಸೇವಾ ಕಾರ್ಯವನ್ನು ಆರಂಭಿಸಿದರು. ಇದು ರಾಜಕೀಯ ಸಮಾವೇಶಗಳ ಮೂಲಕ ಜನರನ್ನು ಸಂಘಟಿಸುವ ಪ್ರಮುಖ ಸಂಸ್ಥೆಯಾಗಿಯೂ ಕಾರ್ಯನಿರ್ವಹಿಸಿತು. 

	1916ರ ಕೊನೆಯ ವೇಳೆಗೆ ಈ ಚಳವಳಿ ತೀವ್ರಗೊಂಡಿತು. 1916ರ ಲಖನೌ ಅಧಿವೇಶನದಲ್ಲಿ ಮಂದಗಾಮಿ ಹಾಗೂ ತೀವ್ರಗಾಮಿಗಳು ಒಂದುಗೂಡಿದರು. ಮುಸ್ಲಿಮ್ ಲೀಗ್ ಹಾಗೂ ಕಾಂಗ್ರೆಸ್ ನಡುವೆ ಒಪ್ಪಂದ ಏರ್ಪಟ್ಟಿತು. ಈ ಅಧಿವೇಶನದಲ್ಲಿ ಹೋಮ್‍ರೂಲ್ ಲೀಗಿನ ಸದಸ್ಯರು ಕಾಂಗ್ರೆಸ್ಸಿನ ಸದಸ್ಯರಾದರು. ಲಖನೌ ಕಾಂಗ್ರೆಸ್‍ನ ಅನಂತರ ಟಿಳಕರು ಹಾಗೂ ಆನಿಬೆಸೆಂಟರು ಭಾರತಾದ್ಯಂತ ಸಂಚರಿಸಿ ಬೆಂಬಲಗಳಿಸಿದರು. ಪರಿಣಾಮವಾಗಿ ಸಮಗ್ರ ಭಾರತದ ರಾಜಕೀಯದಲ್ಲಿಯೇ ಹೊಸ ವಿಚಾರಕ್ರಾಂತಿಯ ಬಿರುಗಾಳಿ ಬೀಸಿತು. ಈ ಚಳವಳಿಯ ಪರಿಣಾಮವಾಗಿ ಕಾಂಗ್ರೆಸ್ ಬಲಗೊಂಡಿತು. ಬ್ರಿಟಿಷರ ನಿಲುವಿನಲ್ಲಿ ಸೌಮ್ಯ (ಮಂದಗಾಮಿ)ವಾದಿಗಳಿಗೆ ನಂಬಿಕೆ ಹುಟ್ಟಲಿಲ್ಲ. ಮಹಾಯುದ್ಧದಲ್ಲಿ ಟರ್ಕಿಯು ಜರ್ಮನಿ ಪರ ಇದ್ದುದರಿಂದ ಭಾರತೀಯ ಮುಸಲ್ಮಾನರಿಗೆ ಬ್ರಿಟಿಷರ ಬಗ್ಗೆ ಸಹಾನುಭೂತಿ ಇರಲಿಲ್ಲ. ಇದೇ ಸಮಯದಲ್ಲಿ ಟಿಳಕರು ಶ್ರಮವಹಿಸಿ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ಎರಡನ್ನು ಒಂದುಗೂಡಿಸಿದರು. ಎಲ್ಲರಿಂದಲೂ ಈ ಚಳವಳಿಗೆ ಬೆಂಬಲ ದೊರಿಕಿತ್ತಲ್ಲದೆ, ಮೋತಿಲಾಲ್ ನೆಹರು ಉತ್ತರ ಪ್ರದೇಶದ ಹೋಮ್‍ರೂಲ್ ಲೀಗಿನ ಅಧ್ಯಕ್ಷರಾದರು.

	ಚಳವಳಿ ತೀವ್ರವಾಗುತ್ತಿದ್ದಂತೆ ಬ್ರಿಟಿಷ್ ಸರ್ಕಾರ ಉಗ್ರಕ್ರಮ ಕೈಗೊಳ್ಳಲಾರಂಭಿಸಿತು. ಆನಿಬೆಸೆಂಟ್, ಜಾರ್ಜ್ ಅರುಂಡೇಲ್ ಮುಂತಾದ ನಾಯಕರ ಬಂಧನವಾಯಿತು. ಈ ಬಂಧನದ ವಿರುದ್ಧ ಭಾರತಾದ್ಯಂತ ತೀವ್ರ ಪ್ರತಿಭಟನೆ ನಡೆಸಲಾಯಿತು. ಮಂದಗಾಮಿಗಳಲ್ಲಿ ಅನೇಕರು ಈ ಲೀಗಿನ ಸದಸ್ಯರಾದರು. ಭಾರತೀಯರಲ್ಲಿ ಪ್ರತಿಭಟನೆ ತೀವ್ರವಾಗುತ್ತಿ ದ್ದಂತೆ ಬ್ರಿಟಿಷ್ ಸರ್ಕಾರ ತನ್ನ ಧೋರಣೆಯನ್ನು ಬದಲಿಸಿಕೊಂಡಿತು. ಅಂದಿನ ಸೆಕ್ರೆಟರಿ ಆಫ್ ಸ್ಟೇಟ್ ಆಗಿದ್ದ ಮಾಂಟೆಗೊ ಇಂಗ್ಲೆಂಡಿನ ಪಾರ್ಲಿಮೆಂಟಿನಲ್ಲಿ ಯುದ್ಧಾನಂತರ ಆಡಳಿತ ಸುಧಾರಣೆಗಳ ಭರವಸೆ ನೀಡಿ ಕ್ರಮೇಣ ಸ್ವಯಂ ಆಡಳಿತ ನೀಡುವುದೇ ಸರ್ಕಾರದ ಗುರಿ ಎಂದು ಘೋಷಣೆ ಹೊರಡಿಸಿದ(1917). 1917ರ ಸೆಪ್ಟೆಂಬರ್‍ನಲ್ಲಿ ಆನಿಬೆಸೆಂಟರ ಬಿಡುಗಡೆಯಾಯಿತು. ಇದೇ ವರ್ಷ ಕೊಲ್ಕತ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷೆಯಾಗಿ ಆನಿಬೆಸೆಂಟ್ ಆಯ್ಕೆಗೊಂಡರು(1917). 1918ರ ವೇಳೆಗೆ ಹೋಮ್‍ರೂಲ್ ಚಳವಳಿಯ ತೀವ್ರತೆ ಕಡಿಮೆಯಾ ಯಿತು. ಈ ಚಳವಳಿ ಹಳ್ಳಿ-ಪಟ್ಟಣಗಳಲ್ಲಿದ್ದ ಜನಸಾಮಾನ್ಯರನ್ನು ಜಾಗೃತಗೊಳಿಸಿ ಮುಂಬರುವ ಗಾಂಧೀಯುಗದ ಜನಾಂದೋಲನಕ್ಕೆ ಭೂಮಿಕೆಯನ್ನು ಒದಗಿಸಿತು.	
				
			(ಐ.ಬಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ